ಆಂಡ್ರಾನಿಕಸ್, ಲಿವಿಅಸ್
(ಕ್ರಿ.ಪೂ. 284-204). ಗ್ರೀಕ್ ನಾಟಕಕಾರ, ನಟ, ನಿರ್ದೇಶಕ. ಟಾರೆಂಟಮ್ ಪಟ್ಟಣದ ನಿವಾಸಿ. ಆ ಪಟ್ಟಣ ರೋಮನರಿಗೆ ವಶವಾದಾಗ ಗುಲಾಮನಾಗಿ ರೋಮಿಗೆ ಬಂದ. ಅಲ್ಲಿ ತನ್ನ ಧಣಿಯ ಮಕ್ಕಳಿಗೆ ಗ್ರೀಕನ್ನೂ ಲ್ಯಾಟಿನ್ನನ್ನೂ ಕಲಿಸುತ್ತಿದ್ದು, ಕೆಲವು ಕಾಲಾನಂತರ ಸ್ವಾತಂತ್ರ್ಯ ಪಡೆದುಕೊಂಡ. ಮಧ್ಯವಯಸ್ಸಿನಿಂದ ಆಯುರಂತ್ಯದವರೆಗೂ ಎಂದರೆ ಮೂವತ್ತು ವರ್ಷಕ್ಕೂ ಮೀರಿ ಸಾಹಿತ್ಯಸೇವೆಯಲ್ಲಿ ನಿರತನಾಗಿದ್ದ. ಮುಖ್ಯವಾಗಿ ಗ್ರೀಕ್ ರೂಪಕಗಳನ್ನು ಲ್ಯಾಟಿನ್ನಿಗೆ ಭಾಷಾಂತರ ಮಾಡುವುದೇ ಅವನ ಕೆಲಸವಾಯಿತು. ಅವನ ಒಂಬತ್ತು ಗಂಭೀರನಾಟಕಗಳೂ ನಾಮಾವಶೇಷವಾಗಿವೆ; ಈಜಿಸ್ತಸ್, ಏಜಾಕ್ಸ್, ಹರ್ಮಿಯನಿ-ಇತ್ಯಾದಿ ಅಂಕಿತಗಳನ್ನು ನೋಡಿದರೆ ಆ ನಾಟಕಗಳು ಎಂತಿದ್ದವೆಂದು ಕೊಂಚ ಊಹಿಸಬಹುದು. ಮೂರು ಹರ್ಷನಾಟಕಗಳ ತುಣುಕುಗಳು ಉಪಲಬ್ಧವಾಗಿವೆ. ಕವಿಶಕ್ತಿಯನ್ನು ಖಚಿತವಾಗಿ ಅಳೆಯುವುದಕ್ಕೆ ಆಸ್ಪದವಿಲ್ಲದಿದ್ದರೂ ಲಭ್ಯವಾಗಿರುವ ಅವನ ವಚನಗಳನ್ನು ಪರಿಶೀಲಿಸಿದರೆ ಸಿಸಿóರೊನ ಅಭಿಪ್ರಾಯವನ್ನು ಸಮರ್ಥಿಸಬೇಕಾಗುತ್ತದೆ: ``ಆಂಡ್ರಾನಿಕಸ್ಸನ ನಾಟಕಗಳು ಎರಡನೆ ಸಾರಿ ಓದುವುದಕ್ಕೆ ಅರ್ಹವಲ್ಲ.''

ಅದು ಹೇಗಾದರೂ ಇರಲಿ, ವಿಶಿಷ್ಟವಾದೊಂದು ಗೌರವಕ್ಕೆ ಆಂಡ್ರಾನಿಕಸ್ ಹಕ್ಕುದಾರ. ವಿದ್ವಾಂಸ ಡಬ್ಲ್ಯು. ವೈ. ಸೆಲ್ಲರ್ ವರ್ಣಿಸಿರುವಂತೆ ಆಂಡ್ರಾನಿಕಸ್ ರೋಮನ್ ಜನರಿಗೆ ಉಪಾಧ್ಯಾಯನಾದ; ಅವರ ಸಾಹಿತ್ಯಕ್ಕೆ ಜನಕನಾಗಲಿಲ್ಲ. ಕಾರ್ತೇಜಿನೊಡನಾದ ಘೋರಸಂಗ್ರಾಮ ಮುಗಿದಾಗ ಕ್ರಿ.ಪೂ. 240ರಲ್ಲಿ, ಉಲ್ಲಾಸಗೊಂಡ ರೋಮನರು ಮಹೋತ್ಸವವನ್ನು ಏರ್ಪಡಿಸಿದರು. ಅದರ ಅಂಗವಾಗಿ ಆಂಡ್ರಾನಿಕಸ್ ಗ್ರೀಕ್ ಮಾದರಿಯ ಒಂದು ಗಂಭೀರನಾಟಕವನ್ನೂ ಒಂದು ಹರ್ಷ ನಾಟಕವನ್ನೂ ರಚಿಸಿ, ತಾನೇ ಒಬ್ಬ ನಟನಾಗಿ ಅವನ್ನು ಪ್ರದರ್ಶಿಸಿದ. ಅದೊಂದು ದೊಡ್ಡ ಸಾಂಸ್ಕøತಿಕ ಘಟನೆಯಾಗಿತ್ತು. ರೋಮನ್ ಸಂಸ್ಕøತಿಯ ಚರಿತ್ರೆಯಲ್ಲಿ ಕ್ರಿ.ಪೂ. 240 ಒಂದು ಪ್ರಧಾನ ವರ್ಷ. ರೋಮನರು ಕ್ರಮಬದ್ಧವಾದ ನಾಟಕವನ್ನು ಕಂಡದ್ದು ಆಗಲೇ. ನಡೆನುಡಿಯಲ್ಲಿ ಒರಟೊರಟಾಗಿ ಸಾಹಿತ್ಯಕಲೆಯಲ್ಲಿ ಹಿಂದಿದ್ದ ಅವರಿಗೆ, ಉಚ್ಚಮಟ್ಟ ಮುಟ್ಟಿದ್ದ ಗ್ರೀಕರ ಮೇಲ್ಪಂಕ್ತಿ ದೊರೆತದ್ದು ಅವರ ಪುಣ್ಯವಿಶೇಷ. ಅಲ್ಲಿಂದ ಮುಂದೆ ರೋಮನರ ಮೇಲೆ ಗ್ರೀಕರ ಪ್ರಭಾವ ಹೆಚ್ಚಾಯಿತು. 

	ಹೋಮರನ ಭವ್ಯಕಾವ್ಯ ಒಡಿಸ್ಸಿಯನ್ನೂ ಆಂಡ್ರಾನಿಕಸ್ ತರ್ಜುಮೆ ಮಾಡಿಕೊಟ್ಟ. ಅದು ಇನ್ನೂರು ಇನ್ನೂರೈವತ್ತು ವರ್ಷ ಶಾಲೆಯ ಪಠ್ಯಪುಸ್ತಕವಾಗಿತ್ತು. ಕ್ರಿ.ಪೂ. 207ರಲ್ಲಿ ಗಾನ-ನರ್ತನಕ್ಕೆ ಯುಕ್ತವಾದ ದೇಶಭಕ್ತಿಯ ಪ್ರಗಾಥವನ್ನು ರಚಿಸುವ ಭಾರ ಅವನಮೇಲೆ ಬಿತ್ತು. ಅದರ ಫಲವಾಗಿಯೊ ಅಥವಾ ಇನ್ನೊಂದು ಪ್ರಗಾಥದ ಫಲವಾಗಿಯೊ ಕವಿಸಂಘಕ್ಕೆ ಅಧ್ಯಕ್ಷನಾಗುವ ಸೌಭಾಗ್ಯ ಅವನಿಗೆ ದಕ್ಕಿತು.

(ಎಚ್.ಸಿ.ಕೆ.)
(ಪರಿಷ್ಕರಣೆ: ಎಲ್. ಎಸ್. ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ